ಕವಿತೆ- ಅಂಗಲು ಹುಳುವಿನ ಪರಕಾಯ ಪ್ರವೇಶ- ಎ.ಕೆ.ರಾಮಾನುಜಂ
Pravaralogy Pravaralogy
276 subscribers
7,495 views
225

 Published On Apr 5, 2020

ಅಮೇರಿಕದಲ್ಲಿ ಕೇಳಿದ ಮಕ್ಕಳ ಕತೆ ಒಂದರಲ್ಲಿ
ಒಂದು ದಿನ
ಗುಬ್ಬಚ್ಚಿ ಬೇರೆಲ್ಲೋ ನೋಡುತ್ತಿದ್ದಾಗ
ಅಂಗುಲದ ಹುಳ ಕಣ್ಣಿಗೆ ಬಿತ್ತು.

ಒಂದಂಗುಲದ ಹುಳ-
ಹಸಿ ಮೈ ಹಸಿರು,
ಮೂಗು ಕೆಂಪು ಮೂಗುತಿ.
ಮುಖ ಒತ್ತಿ

ಬೆನ್ನೆಳೆದು

ಮಾ
ನಾ
ಗಿ ಮೈ ಮಡಿಸಿ
ಮೈಯುದ್ದದ ಹೆಜ್ಜೆ ಇಟ್ಟು ಇಟ್ಟು
ನೆಲ ಅಳೆದು ಸುರಿದು ಅಂಗುಲ ಅಂಗುಲ ಅಂಗುಲ
ಸದ್ದಿಲ್ಲದೆ ಗುರುತಿಲ್ಲದೆ ಹೆಸರಿಲ್ಲದೆ ಮುಲ ಮುಲ ಮುಲ
ಹೋಗುವ ಹುಳು
ಅಂಗುಲದ ಹುಳು.

ನೋಡಿತು ಗುಬ್ಬಚ್ಚಿ, ಅದಕ್ಕೆ ಹಸಿವು
ಬೇರೆ, ಇನ್ನೇನು ಕೊಕ್ಕಿನಲ್ಲಿ ಕೊಕ್ಕಿ ಎತ್ತಿ
ನುಂಗಬೇಕು,

ಆಗ ಹುಳ,
"ತಿಂದು ಬಿಡಬೇಡಿ-
ನಾನು ಅಂಗುಲದ ಹುಳ, ಉಪಕಾರಿ.
ಪ್ರಪಂಚ ಅಳೆಯುವ ಹುಳ."
ಎಂದಿತು.

"ಹಾಗೋ? ಹಾಗಿದ್ದರೆ
ನನ್ನ ಬಾಲ
ಅಳಿ," ಎಂದು ಬಾಲ ತೋರಿಸಿತು ಗುಬ್ಬಚ್ಚಿ.

"ಅದಕ್ಕೇನಂತೆ? ಇದೋ ಅಳೆದೆ.
ಒಂದು ಎರಡು ಮೂರು ನಾಲ್ಕು ಐದು
ಐದಂಗುಲ ನಿಮ್ಮ ಬಾಲ."

"ನೋಡಿದೆಯಾ? ಗೊತ್ತೇ ಇರಲಿಲ್ಲ.
ನನ್ನ ಬಾಲ
ಐದಂಗುಲ! ಐದು, ಒಂದಲ್ಲ ಎರಡಲ್ಲ
ಮೂರಲ್ಲ ನಾಲ್ಕಲ್ಲ, ಐದು!"

ಎಂದಿದ್ದೇ ಅಳೆಸಿಕೊಂಡ ಗುಬ್ಬಚ್ಚಿ ಏನು ಮಾಡಿತು,
ಹುಳ ಎತ್ತಿ ಹೆಗಲ
ಮೇಲೆ ಕೂರಿಸಿಕೊಂಡು ಮಿಕ್ಕ ಹಕ್ಕಿಗಳ ಹತ್ತಿರ ಹಾರಿಹೋಯಿತು.
ಅವಕ್ಕೆಲ್ಲ ಅಳೆಯುವುದು ಬೇಕಾದಷ್ಟಿತ್ತು.

ಹುಳದ ಅಳತೆಯ
ಜೀವನ ಶುರುವಾಯಿತು:
ಅದು ಹಂಸದ ಕತ್ತಳೆಯಿತು.
ಜಪಾನೀ ಹಾಲಕ್ಕಿಯ ಮೂಗಳೆಯಿತು.
ಅಮೇರಿಕನ್ ಕೊಕ್ಕರೆಯ ಎತ್ತಿದ ಕಾಲ-
ಳೆಯಿತು. ಯಾವುದೋ ಕಿತ್ತಳೆ
ಬಣ್ಣದ ಪಕ್ಷಿ, "ನನ್ನ ನಾಲ-
ಗೆ ಅಳಿ" ಅಂದಾಗ ಹೆದರಿ
"ನಿನ್ನ ನಾಲಗೆಗೆ
ಹುಳ ಬೀಳ" ಎಂದು ಒಳಗೊಳಗೆ ಶಪಿಸಿ
ಬೆವತು, ಗಂಟಲು ಮೊದಲು ಮಾಡಿ
ನಾಲಗೆಯ ತೊಟ್ಟಿಕ್ಕುವ ತುದಿವರೆಗೂ ಅವಸರವಸರವಾಗಿ ಅಂಗುಲ ಅಂಗುಲ ಅಂಗುಲ
ಅಳೆದು ಬದುಕಿಕೊಂಡಿತು ಹುಳ.

ಹೀಗೆ ಪೆಲಿಕನ್ ಕೊಕ್ಕು.
ನವಿಲಿನ ಗರಿ. ಮರಕುಟಕದ
ಕಿರೀಟದ ಪಟ್ಟೆ. ಮುದಿಗೂಬೆಯ
ಗರಿ ಉದುರಿದ ಹೊಟ್ಟೆ. ಎಷ್ಟೋ ಹೆಸರಿ
ಲ್ಲದ ಪುಕ್ಕ, ಪುಸ್ತಕ ಹೆಸರಿನ ವಿಜಾತಿ ಶುಕ ಪಿಕಗಳ
ಎದೆ, ಮುಖ,
ನೆಲದವರಾರೂ ಕಾಣದ
ಪಕ್ಷಿಯೋನಿ ಪಕ್ಷಿಲಿಂಗ,
ನಾಚಿಕೆ ಇಲ್ಲದ ನಾಚಿಕೆ ಅಂಗ
ಎಲ್ಲ ಹೊಕ್ಕು ನೋಡಿ
ಪರಕಾಯ ಪ್ರವೇಶ ಮಾಡಿ
ಅಳೆದು ಅಳೆದು
ಕೂಡಿ ಕಳೆದು ಸುಸ್ತಾಯಿತು ಪಾಪ
ಷಂಡ ಹುಳು.

ಒಂದು ದಿನ
ಅಲ್ಲಿಗೆ ಕೋಗಿಲೆ ಬಂತು.
"ಏ ನನ್ನ ಹಾಡೆ
ಷ್ಟುದ್ದ? ಅಳೆದು ಹೇಳು" ಎಂತು.
ಅಂಗುಲದ ಹುಳ ಬೆಚ್ಚಿ,
"ಬಾಲ ಅಳೆಯುತ್ತೇನೆ, ಮೂಗು ಮೂತಿ ಕಾಲು ಕೈ
ಏನು ಬೇಕೋ ಹೇಳಿ ಅಳೆಯುತ್ತೇನೆ. ಸಂಕೋಚ
ವಿಲ್ಲದೆ ಹೇಳಿ, ಏನು ಬೇಕಾದರೂ ತೋರಿಸಿ, ಸಾಷ್ಟಾಂಗ ಬಿದ್ದು
ಅಳೆಯುತ್ತೇನೆ. ಆದರೆ, ಹಾಡು? ಅದು
ಅಳೆಯುವುದಕ್ಕೆ ಬರುವುದಿಲ್ಲ." ಎಂದಿತು.

"ಅಳೆಯುತ್ತೀಯೋ? ಗಬಕಾಯಿಸಲೋ?
ಚಂಡಾಲ!" ಎಂದು ಚಕಮಕ ಕೊಕ್ಕು ಮಸೆಯಿತು ಕೋಗಿಲೆ.

"ಹಾಗೆ ಕೋಪ ಮಾಡಿಕೊಳ್ಳಬೇಡಿ.
ಆಗಲಿ. ಅಳೆಯುತ್ತೇನೆ. ನೀವು ಹಾಡಿ," ಎಂದು
ಒಪ್ಪಿಕೊಂಡಿತು ಹುಳ, ಮೈಯೆಲ್ಲ ನಾಡಿ ಡವಡವ ಬಡಿದು.
ಕೋಗಿಲೆ ಕೆಮ್ಮಿ ಕ್ಯಾಕರಿಸಿ
ಕಫ ಉಗಿದು
ಮೂಗೆತ್ತಿ
ಆಕಾಶದವಕಾಶದಲ್ಲಿ ದನಿ ಎತ್ತಿ ಹಾಡಿತು.

ಕೋಗಿಲೆ ಹಾಡಿತು :
ಹುಳ ಅಳೆಯಿತು,
ಅಂಗುಲ ಅಂಗುಲ ಅಂಗುಲ
ಮುಖವೊತ್ತಿ ಮೈಯೆತ್ತಿ ಹತ್ತಿ ಇಳಿದು ಹೊಳೆದು ಸುಳಿದು ಒತ್ತಿ ಎತ್ತಿ
ಉಂಗುರ ಗುಂಗುರು ಉಂಗುರದೊಳಗೇ ತೂರಿ ತೂರಿ ಅಪ್ಪಿ ತಪ್ಪಿ
ಅಂಗುಲ ಅಂಗುಲ ಅಂಗುಲ ಅಳೆಯಿತು.
ಅಳೆದು ಅಳೆದು
ಮರಗಿಡದ ಕಾಡ ನಡುವೆ ಹಾಡು ಮುಗಿಯುವುದರೊಳಗೆ ಸದ್ದಿಲ್ಲದೆ
ಗುರುತಿಲ್ಲದೆ

ಹೆಸರಿಲ್ಲದೆ

ಕಣ್ಮರೆಯಾಯಿತು.

show more

Share/Embed